1885-1930. ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ಕಾದಂಬರಿಕಾರ, ಸಣ್ಣಕಥೆಗಾರ. ನಾಟ್ಟಿಂಗ್‍ಹ್ಯಾಮ್‍ಶೈರ್‍ನ ಈಸ್ಟ್‍ವುಡ್ ಎಂಬಲ್ಲಿ 1885ರಲ್ಲಿ ಜನಿಸಿದ. ತಂದೆ ಗಣಿ ಕಾರ್ಮಿಕ, ತಾಯಿ ಶಾಲಾ ಉಪಾಧ್ಯಾಯಿನಿ. ಈತ ಜೀವನದುದ್ದಕ್ಕೂ ಕಾಯಿಲೆ ಯನ್ನನುಭವಿಸಿದ; ಕೊನೆಗೆ ಕ್ಷಯರೋಗಕ್ಕೆ ತುತ್ತಾದ. ತಂದೆತಾಯಿಗಳ ವಿರಸ ದಾಂಪತ್ಯವನ್ನು ನೋಡಿ ಬೆಳೆದ ಈತನಿಗೆ ತಾಯಿಯ ಮೇಲೆ ವಿಶೇಷ ಒಲವು ಉಂಟಾಯಿತು. ಮಗ ಗಣಿ ಕೆಲಸವನ್ನು ಕೈಕೊಳ್ಳದ ಹಾಗೆ, ಸಾಕಷ್ಟು ವಿದ್ಯೆ ಕಲಿಯಲು ಆಕೆ ಪ್ರೋತ್ಸಾಹಿಸಿದಳು. 15ನೆಯ ವರ್ಷಕ್ಕೆ ಇವನ ವಿದ್ಯಾಭ್ಯಾಸ ಮುಗಿಯಿತು. ಶಸ್ತ್ರಚಿಕಿತ್ಸೆಗೆ ಬೇಕಾದ ಸಲಕರಣೆ ತಯಾರಿಕೆಯ ಕಾರ್ಖಾನೆಯೊಂದರಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿಕೊಂಡ.
 
ಚಿಕ್ಕವಯಸ್ಸಿಗೇ ಕಾವ್ಯ, ಕಥೆ ಬರೆಯುವುದರಲ್ಲಿ ತೊಡಗಿದ್ದ ಈತನ ಮೊದಲ ಕಾದಂಬರಿ ದ ವೈಟ್ ಪೀಕಾಕ್ (1911). ಇವನ ಹೆಸರನ್ನು ಚಿರಸ್ಥಾಯಿಗೊಳಿಸಿದ ಆತ್ಮಕಥಾತ್ಮಕ ಕಾದಂಬರಿಯೆಂದು ಪ್ರಸಿದ್ಧವಾಗಿರುವ ಸನ್ಸ್ ಅಂಡ್ ಲವರ್ಸ್ 1913ರಲ್ಲಿ ಬೆಳಕು ಕಂಡಿತು. ಈತ ಒಂದನೆಯ ಮಹಾಯುದ್ಧ ಕಾಲದಲ್ಲಿ ಇಂಗ್ಲೆಂಡಿನ ಬರೆಹಗಾರರೊಡನೆ ನಿಕಟವಾದ ಸ್ನೇಹ ಪಡೆದುಕೊಂಡ. ಆಲ್ಡಸ್ ಹಕ್ಸ್‍ಲೀ, ಆತನ ಪತ್ನಿ ಮರಿಯಾ ಡಿ.ಗಾರ್ನೆಟ್, ಜೆ.ಎಮ್.ಮರ್ರೆ, ಕ್ಯಾತರಿನ್ ಮಾನ್ಸ್‍ಫೀಲ್ಡ್, ಆಲ್ಡಿಂಗ್‍ಟನ್ ಮತ್ತು ಬರ್ಟ್‍ರಂಡ್ ರಸಲ್ (ತರುವಾಯ ರಸಲ್‍ನ ಜೊತೆ ಈತ ವಿಪರೀತ ಜಗಳವಾಡಿದ). ಮೊದಲಾದವರ ನಿಕಟವರ್ತಿಯಾದ. ತರುವಾಯ ದ ರೇನ್‍ಬೊ(1915), ದ ವಿಮೆನ್ ಇನ್ ಲವ್(1916ರಲ್ಲಿ ಬರೆದರೂ ಇದು ಪ್ರಕಟವಾದದ್ದು 1920ರಲ್ಲಿ), ಏರನ್ಸ್‍ರಾಡ್(1922) ಕೃತಿಗಳನ್ನು ರಚಿಸಿದ. ಶ್ರೀಲಂಕ, ಆಸ್ಟ್ರೇಲಿಯ, ಅಮೆರಿಕ ಮತ್ತು ಮೆಕ್ಸಿಕೋಗಳಲ್ಲಿ ಪ್ರವಾಸ ಮಾಡಿದ. ಇವನ ಕಾಂಗರೂ ಕಾದಂಬರಿ 1923ರಲ್ಲಿ ಪ್ರಕಟವಾಯಿತು. ಅದೇ ವರ್ಷ ಸ್ಟಡೀಸ್ ಇನ್ ಕ್ಲಾಸಿಕ್ ಅಮೆರಿಕನ್ ಲಿಟರೇಚರ್ ಎಂಬ ವಿಮರ್ಶಾ ಗ್ರಂಥ ಬೆಳಕು ಕಂಡಿತು.

ಇವನ ಅನಾರೋಗ್ಯ, ತಿರುಗಾಟ ಮತ್ತು ಹೆಂಡತಿಯೊಂದಿಗೆ ಹೆಚ್ಚುತ್ತಿದ್ದ ಇವನ ಮನಸ್ತಾಪ-ಇವನ್ನೆಲ್ಲ ಗಮನಿಸಿದರೆ ಲಾರೆನ್ಸ್ ಆ ಅನುಕೂಲವಲ್ಲದ ಪರಿಸ್ಥಿತಿಯಲ್ಲೂ ಬರೆದದ್ದು ಅಗಾಧಪ್ರಮಾಣ ದಲ್ಲಿದೆ. ಯಾವಾಗಲೂ ಲಾರೆನ್ಸ್ ಹಣದ ಬಿಕ್ಕಟ್ಟಿನಲ್ಲಿ ನರಳಿದ; ಕೆಲವು ಶ್ರೀಮಂತ ಸ್ನೇಹಿತರು ಇವನಿಗೆ ಆಗಾಗ ಸಹಾಯ ಮಾಡುತ್ತಿದ್ದರು. ಚಿತ್ರಕಲೆಯನ್ನು ಈತ ಬಹಳವಾಗಿ ಹಚ್ಚಿಕೊಂಡ. 1929ರಲ್ಲಿ ಇವನ ಚಿತ್ರಗಳ ಪ್ರದರ್ಶನ ನಡೆದಾಗ ಅವು ಅಶ್ಲೀಲ ಚಿತ್ರಗಳೆಂದು ಪೊಲೀಸರು ಮುಟ್ಟುಗೋಲು ಹಾಕಿಕೊಂಡರು. ಫ್ಲಾರೆನ್ಸ್‍ನ ಮಿರೆಂಡಾ ಎಂಬಲ್ಲಿ ಉಳಿದಿದ್ದ ದಿನಗಳಲ್ಲಿ ಈತ ಅತ್ಯಂತ ವಿವಾದಕ್ಕೊಳಗಾದ ಲೇಡಿ ಚಾಟರ್ಲೀಸ್ ಲವರ್ ಎಂಬ ಕೊನೆಯ ಕಾದಂಬರಿಯನ್ನು ಬರೆದ. ಫ್ಲಾರೆನ್ಸ್‍ನಲ್ಲಿ 1928ರಲ್ಲಿ ಈ ಕಾದಂಬರಿಯನ್ನು ಖಾಸಗಿ ಪ್ರಸಾರಕ್ಕಾಗಿ ಪ್ರಕಟಿಸಲಾಯಿತು. 30 ವರ್ಷಗಳ ಅನಂತರ ಇಂಗ್ಲೆಂಡ್ ಮತ್ತು ಅಮೆರಿಕ ದಲ್ಲಿ ಇದರ ಸಮಗ್ರ ಆವೃತ್ತಿಯನ್ನು ಪ್ರಕಟಿಸ ಲಾಯಿತು; ಇದು ಅಶ್ಲೀಲ ಸಾಹಿತ್ಯವೆಂದು ಆಪಾದಿಸಿ ದವರು ಸೋಲೊಪ್ಪಿಕೊಳ್ಳ ಬೇಕಾಯಿತು. ಇವನ ಕಾಯಿಲೆ ಉಲ್ಬಣವಾಯಿತು; ಇವನನ್ನು ಬದುಕಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ಪತ್ನಿ ಫ್ರೀಡಾ ಲಾರೆನ್ಸ್ ಇವನನ್ನು ಮೊದಲು ಜರ್ಮನಿಗೆ ಅನಂತರ ಫ್ರಾನ್ಸಿಗೆ ಕರೆದೊಯ್ದಳು. ಆದರೆ ಈತ 1930 ಮಾರ್ಚ್ 2ರಂದು ನಿಧನನಾದ.

ಆಧುನಿಕ ಮನುಷ್ಯ ತನ್ನ ಜೀವನ ಗುಣಮಟ್ಟವನ್ನು ಕಾಪಾಡಿಕೊಳ್ಳುವ  ಸಾಮಥ್ರ್ಯವನ್ನು ಕಳೆದು ಕೊಳ್ಳುತ್ತಿದ್ದಾನೆ ಎಂದು ಈತ ತಿಳಿಸಿದ್ದನ್ನು ನೆನೆದರೆ ಇವನ ಕೃತಿಗಳ ವಿರುದ್ಧ ಜನರು ಕಿಡಿಕಾರಿದ್ದೇಕೆ ಎಂದು ಶಂಕೆಯಾಗುತ್ತದೆ. ತನ್ನ ಪಾತ್ರಗಳು ಮತ್ತು ನಿಸರ್ಗದ ಭೌತಿಕ ಜಗತ್ತಿನೊಡನೆ ತಾದಾತ್ಮ್ಯದಿಂದ ಇವನು ಅತ್ಯಂತ ಆಪ್ತವಾಗಿ  ಬರೆದ. ಇವನು 1914, 1922 ಮತ್ತು 1928ರಲ್ಲಿ ಬರೆದ ಕಥಾಸಂಕಲನಗಳನ್ನು ಮೂರು ಸಂಪುಟಗಳಲ್ಲಿ ಹೊರತರಲಾಯಿತು (1955). ಇವನ ಪ್ರವಾಸ ಬರೆಹಗಳೂ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಕಾವ್ಯರಚನೆಯಲ್ಲೂ ಸಿದ್ಧಹಸ್ತನಾಗಿದ್ದ ಈತ ಲವ್ ಪೊಯೆಮ್ಸ್(1913), ಅಮೊರ್ಸ್(1916), ಲುಕ್! ವಿ ಹ್ಯಾವ್ ಕಮ್ ಥ್ರೂ(1917), ಬಡ್ರ್ಸ್, ಬೀಸ್ಟ್ಸ್ ಅಂಡ್ ಫ್ಲವರ್ಸ್(1923), ಪ್ಯಾನ್ಸೀಸ್(1929) ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಇವನ ಸಮಗ್ರ ಕವಿತೆಗಳು ಕಂಪ್ಲೀಟ್ ಪೊಯೆಮ್ಸ್ (3 ಸಂಪುಟಗಳು, 1957) ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಈತನ ಪತ್ರಗಳನ್ನು ಹಕ್ಸ್‍ಲೀ ಸಂಪಾದಿಸಿದ್ದಾನೆ (1932).	            

(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ